ಕೆನಡದ ಆರ್ಥಿಕತೆ

ಉತ್ತರ ಅಮೆರಿಕ ಖಂಡದ ಉತ್ತರಾರ್ಧವನ್ನಾಕ್ರಮಿಸಿಕೊಂಡಿರುವ ಕೆನಡ ಸಂಪನ್ಮೂಲಗಳ ದೃಷ್ಟಿಯಿಂದ ಮತ್ತು ಆರ್ಥಿಕ ಬೆಳೆವಣಿಗೆಯ ದೃಷ್ಟಿಯಿಂದ ಪ್ರಪಂಚದಲ್ಲೆ ವಿಶಿಷ್ಟಸ್ಥಾನ ಪಡೆದುಕೊಂಡಿದೆ. ಕೆನಡದ ಸಂಪನ್ಮೂಲಗಳು ವೈವಿಧ್ಯಪೂರ್ಣವಾದವು. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಅರಣ್ಯಸಂಪತ್ತು ಇವೆಲ್ಲವೂ ಇಡೀ ಕೆನಡದ ಅರ್ಥವ್ಯವಸ್ಥೆಯ ಜೀವನಾಡಿಗಳಾಗಿವೆ. ಇಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ತಲಾ ವಿದ್ಯುತ್ ಅನುಭೋಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕೆನಡ, ತನ್ನ ಆರ್ಥಿಕ ಬೆಳೆವಣಿಗೆಗೆ ವಿದ್ಯುತ್ತಿನ ಸಂಪೂರ್ಣ ಉಪಯೋಗ ಪಡೆದುಕೊಂಡಿದೆ. ಕೆನಡದ ಆರ್ಥಿಕ ಬೆಳೆವಣಿಗೆಗೆ ತಳಹದಿಯಾದ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಮುಂದೆ ಕೊಟ್ಟಿದೆ.

 	
1 ಕೃಷಿ: ಕೆನಡದ ಆರ್ಥಿಕ ಬೆಳೆವಣಿಗೆ ಅವಿರತವಾಗಿ ನಡೆದು ಬರುತ್ತಿದ್ದರೂ ಅದರ ಆರ್ಥಿಕತೆಯಲ್ಲಿ ಕೃಷಿ ತನ್ನದೇ ಆದ ಪ್ರಾಮುಖ್ಯ ಮುಂದುವರಿಸಿಕೊಂಡು ಬಂದಿದೆ. 20ನೆಯ ಶತಮಾನದ ಮಧ್ಯಭಾಗದ ಅನಂತರ ಇತರ ಸಂಪನ್ಮೂಲಗಳ ಅಭಿವೃದ್ಧಿಯಾಗಿ ಕೃಷಿಉತ್ಪನ್ನದ ಪ್ರಾಮುಖ್ಯ ಸಾಪೇಕ್ಷವಾಗಿ ಕಡಿಮೆಯಾಗಿದ್ದರೂ ಕೃಷಿ ಅಲ್ಲಿ ತನ್ನ ಪ್ರತಿಷ್ಠೆಯ ಸ್ಥಾನವನ್ನು ಕಳೆದುಕೊಂಡಿಲ್ಲ. 1966ರಲ್ಲಿ ಕೆನಡದಲ್ಲಿ 17.4 ಕೋಟಿ ಎಕರೆಗಳಷ್ಟು ಕೃಷಿಯೋಗ್ಯ ಜಮೀನಿತ್ತು. ಅದರಲ್ಲಿ 10.8 ಕೋಟಿ ಎಕರೆಗಳಲ್ಲಿ ಕೃಷಿ ನಡೆಯುತ್ತಿತ್ತು. ಉದ್ಯೋಗಿಗಳ ದೃಷ್ಟಿಯಿಂದ ಸಹ ಕೃಷಿಗೆ ಪ್ರಾಧಾನ್ಯ ಇದೆ. ವೈಜ್ಞಾನಿಕ ಬೇಸಾಯದಿಂದಾಗಿ ಕೃಷಿ ಅವಲಂಬಿತರ ಪ್ರತಿಶತತ್ವ ಈಚೆಗೆ ಮಾತ್ರ ಸ್ವಲ್ಪ ಕಡಿಮೆಯಾಗಿದೆ.

ಕೆನಡದ ಮುಖ್ಯ ಬೆಳೆಗಳು ಗೋಧಿ, ಓಟ್ಸ್, ಬಾರ್ಲಿ, ಆಲೂಗೆಡ್ಡೆ, ಹೇ, ಫ್ಲಾಕ್ಸ್‍ಸೀಡ್ಸ್. ಇವುಗಳಲ್ಲಿ ಮುಖ್ಯವಾಗಿ ಗೋಧಿ ಮತ್ತು ಓಟ್ಸ್ ಕೃಷಿಯೋಗ್ಯ ಜಮೀನಿನ ಸೇ.50ಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿವೆ. ಇವುಗಳಲ್ಲದೆ ಹೈನವಸ್ತುಗಳಿಗೆ ಸಹ ಕೆನಡದ ಅರ್ಥವ್ಯವಸ್ಥೆಯಲ್ಲಿ ಮುಖ್ಯ ಸ್ಥಾನವುಂಟು. ಕೆನಡದ ಕೃಷಿಯೋಗ್ಯ ಜಮೀನಿನ ಹೆಚ್ಚಿನ ಭಾಗ ದಕ್ಷಿಣದಲ್ಲಿ ಕೇಂದ್ರೀಕೃತವಾಗಿದೆ. ಇದಕ್ಕೆ ಕಾರಣ ಅಲ್ಲಿಯ ಅನುಕೂಲ ವಾತಾವರಣ. ಕೆನಡದ ಒಟ್ಟು ಕೃಷಿಯೋಗ್ಯ ಜಮೀನಿನಲ್ಲಿ ಶೇ.75ರಷ್ಟು ಇರುವುದು ಹುಲ್ಲುಗಾವಲು ಪ್ರದೇಶದಲ್ಲಿ. ಮುಖ್ಯವಾಗಿ ಗೋಧಿ, ಅನಂತರ ಓಟ್ಸ್ ಮತ್ತು ಬಾರ್ಲಿಯನ್ನು ಈ ಪ್ರದೇಶದಲ್ಲಿ ಅತ್ಯಂತ ವೈಜ್ಞಾನಿಕವಾದ ರೀತಿಯಲ್ಲಿ ಬೆಳೆಯಲಾಗುತ್ತದೆ. ದಕ್ಷಿಣ ಆಲ್ಬರ್ಟ ಮತ್ತು ಸ್ಯಾಸ್ಕ್ಯಾಚೆವನ್‍ಗಳಲ್ಲಿ ನೀರಾವರಿ ಸೌಕರ್ಯವುಂಟು. ಅಲ್ಲಿ ಬೀಟ್, ತರಕಾರಿ ಇತ್ಯಾದಿ ಬೆಳೆಗಳನ್ನು ತೆಗೆಯಲಾಗುತ್ತದೆ.  

ಮಹಾಸರೋವರಗಳ ಮತ್ತು ಸೇಂಟ್ ಲಾರೆನ್ಸ್‍ನ ಸುತ್ತಮುತ್ತಣ ಪ್ರದೇಶದಲ್ಲಿ ಮಿಶ್ರ ಬೇಸಾಯ ನಡೆಯುತ್ತಿದ್ದು, ಮುಖ್ಯವಾಗಿ ಹೇ, ಓಟ್ಸ್, ಗೋಧಿ, ಬಾರ್ಲಿ, ಫ್ಲಾಕ್ಸ್, ಧಾನ್ಯಗಳು, ಸಕ್ಕರೆಬೀಟ್, ಸೋಯಬೀನ್ಸ್ ಮತ್ತು ಹೊಗೆಸೊಪ್ಪನ್ನು ಬೆಳೆಯಲಾಗುತ್ತದೆ. ಗಾಜಿನ ಮನೆಗಳಲ್ಲಿ ತರಕಾರಿ ಮತ್ತು ಹೂ ಬೆಳೆಯುವುದು ಇಲ್ಲಿಯ ವೈಶಿಷ್ಟ್ಯ. 

ಬ್ರಿಟಿಷ್ ಕೊಲಂಬಿಯ ಪ್ರದೇಶದಲ್ಲಿ ಮುಖ್ಯವಾಗಿ ಕಣಿವೆ ಪ್ರದೇಶಗಳಲ್ಲಿ ಕೃಷಿ ಕಾರ್ಯ ನಡೆಯುತ್ತದೆ. ಆದರೂ ದಕ್ಷಿಣ ಕೊಲಂಬಿಯದ ಒಳಕಣಿವೆ ಪ್ರದೇಶಗಳನ್ನು ನೀರಾವರಿ ಸೋಕಯಾದ ಮೂಲಕ ಹಣ್ಣು ಬೆಳೆಗೆ ಯೋಗ್ಯವಾಗಿ ಪರಿವರ್ತಿಸಲಾಗಿದೆ. ಸಮುದ್ರತೀರದ ಜಿಲ್ಲೆಗಳಲ್ಲಿ, ಮಿಶ್ರ ಬೇಸಾಯ ಮುಖ್ಯ. ಈ ಪ್ರದೇಶದಲ್ಲಿಯ ಮುಖ್ಯ ಬೆಳೆಗಳು ಆಲೂಗೆಡ್ಡೆ, ಹುಲ್ಲು, ಓಟ್ಸ್, ಹಣ್ಣು ಮತ್ತು ತರಕಾರಿ.

ಪೂರ್ವ ಕೆನಡದ ತಗ್ಗು ಕೃಷಿ ಪ್ರದೇಶ ಮುಖ್ಯವಾಗಿ ಹೈನ ಉದ್ಯಮಕ್ಕೆ ಪೋಷಕವಾಗುವ ಬೆಳೆಗಳನ್ನು ಬೆಳೆಯುತ್ತ ಇದಕ್ಕೆ ತುಂಬ ಸಹಾಯಕವಾಗಿದೆ. ದಕ್ಷಿಣ ಕ್ವಿಬೆಕ್‍ನ ಜಮೀನಿನಲ್ಲಿ ಮುಖ್ಯವಾಗಿ ಹುಲ್ಲು ಮತ್ತು ಓಟ್ಸನ್ನು ಬೆಳೆಯುತ್ತಾರೆ. ಇದು ಡೈರಿ ಉದ್ಯಮಕ್ಕೆ ಬೆನ್ನೆಲುಬಿನಂತಿದೆ. ದಕ್ಷಿಣ ಆಂಟೇರಿಯೋದಲ್ಲಿ ಸಹ ಈ ಬೆಳೆಗಳು ಪ್ರಧಾನ.

ಕೆನಡದ ಮುಖ್ಯ ಕೃಷಿ ಉತ್ಪನ್ನಗಳು

ವಿಸ್ತೀರ್ಣ (000 ಎಕರೆಗಳಲ್ಲಿ)
ಉತ್ಪನ್ನ (000)
ಎಕರೆಯೊಂದರ ಉತ್ಪನ್ನ

ಗೋಧಿ (ಉತ್ಪನ್ನ ಬುಷಲ್‍ಗಳಲ್ಲಿ)
1967
1968
1967
1968
1967
1968

30,120.8
29,422.5
5,92,920
6,49,844
19.7
22.1

ಓಟ್ಸ್    “
7,436.1
7,555.9
3,04,178
3,62,516
40.9
48.0

ಬಾರ್ಲಿ   “
8,115.1
8,836.5
2,48,662
3,25,373
30.6
36.8

ರೈ     “
685.3
678.6
11,981
13,049
17.5
19.2

ಧಾನ್ಯಗಳು  ”
875.5
952.5
74,083
80,743
84.6
84.8

ಬೀನ್ಸ್    “
86.0
90.9
1,435
1,621
16.7
17.8

ಫ್ಲಾಕ್ಸ್    “
1,023.4
1,524.4
9,378
18,166
9.2
11.9

ಆಲೂಗೆಡ್ಡೆ (ಉತ್ಪನ್ನ ಹಂಡ್ರೆಡ್ ವೆಯ್ಟ್‍ಗಳಲ್ಲಿ)
303.8
303.3
46,743
50,904
153.9
167.8

ಸಕ್ಕರೆ ಬೀಟ್ “
83.3
80.2
1,081
1,063
12.98
13.25

ಕೃಷಿಯ ಜೊತೆಜೊತೆಗೆ ಕೆನಡದಲ್ಲಿ ಅಭಿವೃದ್ಧಿಗೊಂಡಿರುವ ಮತ್ತೊಂದು ಉದ್ಯಮವೆಂದರೆ ಜಾನುವಾರು ಸಾಕಣೆ ಮತ್ತು ಹೈನುಗಾರಿಕೆ. ಇವೂ ರಾಷ್ಟ್ರದಲ್ಲಿ ಸಾಕಷ್ಟು ವ್ಯಾಪಕವಾಗಿವೆ. ಅರ್ಥವ್ಯವಸ್ಥೆಯ ಪ್ರಧಾನ ಅಂಶಗಳಾಗಿವೆ. ಇಲ್ಲಿ ಹಸು ಮತ್ತು ಕುರಿಗಳ ಸಾಕಣೆಗೆ ಅನುಕೂಲವುಂಟು. 1967ರಲ್ಲಿ ಹಾಲಿನ ಉತ್ಪನ್ನದ ಮೌಲ್ಯ 69.4 ಕೋಟಿ ಡಾಲರ್.
 
	2 ಅರಣ್ಯ ಸಂಪತ್ತು: ಕೆನಡದ ಅರಣ್ಯ ಸಂಪತ್ತು ಆ ರಾಷ್ಟ್ರದ ಅರ್ಥವ್ಯವಸ್ಥೆಯ ಮತ್ತೊಂದು ಪ್ರಮುಖವಾದ ಅಂಶ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದರಿಂದ ರಾಷ್ಟ್ರೀಯ ವರಮಾನದ ಸೇ.20ರಷ್ಟು ಬರುತ್ತದೆ. ಒಟ್ಟು ರಫ್ತಿನ ಸೇ.33ರಷ್ಟು ಅರಣ್ಯೋತ್ಪನ್ನ. ಕೆನಡದ ಅರಣ್ಯಪ್ರದೇಶದ ವಿಸ್ತೀರ್ಣ 17,00,000 ಚ.ಮೈ. ಆದರೆ ಹೆಚ್ಚಿನ ಭಾಗದ ಕಾಡುಪ್ರದೇಶ ವಾಣಿಜ್ಯ ದೃಷ್ಟಿಯಿಂದ ಅಷ್ಟು ಉಪಯುಕ್ತವಾಗಿಲ್ಲ. ಉತ್ಪನ್ನಯೋಗ್ಯ ಕಾಡುಪ್ರದೇಶದ ವಿಸ್ತೀರ್ಣ 9,50,000 ಚ.ಮೈ. ವಿಸ್ತøತ ಅರಣ್ಯಪ್ರದೇಶದ ಮರಗಳು ಈ ರಾಷ್ಟ್ರದ ಕಾಗದ ಕೈಗಾರಿಕೆ ಮತ್ತು ಮರದ ವಸ್ತುಗಳ ತಯಾರಿಕೆ ಕೈಗಾರಿಕೆಗಳ ಬೆನ್ನೆಲುಬಾಗಿವೆ. ಬ್ರಿಟಿಷ್ ಕೊಲಂಬಿಯ ಪ್ರಾಂತ್ಯ ನಾಟ ಹಾಗೂ ಕುಯ್ದ ಮರದ ವಸ್ತುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿದೆ. ಕ್ವಿಬೆಕ್, ಆಂಟೇರಿಯೋ, ಆಲ್ಬರ್ಟ, ನ್ಯೂ ಬ್ರನ್‍ಸ್óವಿಕ್ ಮತ್ತು ನೋವ ಸ್ಕೋಷ ಇವು ಅನಂತರ ಬರುತ್ತವೆ. ಕೆನಡದ ರಫ್ತಿನ ಪ್ರಮುಖ ವಸ್ತುಗಳಲ್ಲಿ ನಾಟವೂ ಸೇರಿದೆ. 1966ರಲ್ಲಿ ಅರಣ್ಯಸಂಬಂಧ ಕೈಗಾರಿಕೆಗಳಿಂದ ರಫ್ತಾದ ವಸ್ತುಗಳ ಮೌಲ್ಯ 1,59,27,97,000 ಡಾಲರುಗಳು.

 	3 ಖನಿಜ ಸಂಪತ್ತು: ಖನಿಜಗಳ ಉತ್ಪಾದನೆಯಲ್ಲಿ ಕೆನಡಕ್ಕೆ ಪ್ರಪಂಚದಲ್ಲಿ ಮೂರನೆಯ ಸ್ಥಾನ. ಎರಡನೆಯ ಮಹಾಯುದ್ಧದ ಅನಂತರ ಈ ಕೈಗಾರಿಕೆ ಗಮನಾರ್ಹ ಪ್ರಗತಿ ಸಾಧಿಸಿದೆ. 1945ರಲ್ಲಿ ಈ ರಾಷ್ಟ್ರದ ಗಣಿ ಉತ್ಪನ್ನ ಮೌಲ್ಯ 49.9 ಕೋಟಿ ಡಾಲರ್, 1968ರಲ್ಲಿ ಇದು 473.9 ಕೋಟಿ ಡಾಲರ್‍ಗಳಿಗೆ ಏರಿತ್ತು. ಕೆನಡದ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಪ್ರಾಧಾನ್ಯ ದಿನೇ ದಿನೇ ಹೆಚ್ಚುತ್ತಿದೆ. ಗಣಿವಸ್ತುಗಳ ರಫ್ತಿನ ಸುಮಾರು ⅓ಭಾಗದಷ್ಟು.. ಕೆನಡದಲ್ಲಿ ಸುಮಾರು 260 ಗಣಿಗಳಲ್ಲಿ ಉತ್ಪಾದನೆ ನಡೆಯುತ್ತಿದೆ. ಇವುಗಳಲ್ಲಿ 1,00,000 ಕೆನಡಿಯನರು ಉದ್ಯೋಗಿಗಳಾಗಿದ್ದಾರೆ.

 	4 ಮೀನುಗಾರಿಕೆ: ಚಾರಿತ್ರಿಕವಾಗಿ ಮತ್ಸ್ಯೋದ್ಯಮ ಕೆನಡದ ಅರ್ಥ ವ್ಯವಸ್ಥೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತ ಬಂದಿದೆ. ವಾಣಿಜ್ಯಾದಾಯದ ದೃಷ್ಟಿಯಿಂದ ಈ ಕೈಗಾರಿಕೆ ಪ್ರಮುಖವಾದ್ದು. ಕೆನಡದಲ್ಲಿ ಹಿಡಿಯಲಾಗುವ ಹೆಚ್ಚಿನ ಮೀನಿಗೆ ಮಾರುಕಟ್ಟೆ ಅಮೆರಿಕ ಸಂಯುಕ್ತಸಂಸ್ಥಾನ. 1968ರಲ್ಲಿ ಮೀನು ವಿಕ್ರಯದಿಂದ ದೊರೆತ ಆದಾಯ 18.47 ಕೋಟಿ ಡಾಲರ್‍ಗಳು. ವರ್ಷಕ್ಕೆ ಸರಾಸರಿ 200 ಕೋಟಿ ಪೌಂಡ್‍ಗಳಷ್ಟು ಮೀನನ್ನು ಹಿಡಿದು ವಿಕ್ರಯಿಸಲಾಗುತ್ತದೆ. ಕೆಲವು ವರ್ಷಗಳಲ್ಲಿ ಮೀನು ರಫ್ತಿನಲ್ಲಿ ಇಡೀ ವಿಶ್ವದಲ್ಲೇ ಕೆನಡ ಪ್ರಥಮ ಸ್ಥಾನ ಗಳಿಸಿದ್ದುಂಟು. ಮೌಲ್ಯದ ದೃಷ್ಟಿಯಿಂದ ಬ್ರಿಟಿಷ್ ಕೊಲಂಬಿಯಕ್ಕೆ ಪ್ರಥಮ ಸ್ಥಾನ. ಅಟ್ಲಾಂಟಿಕ್ ಪ್ರಾಂತ್ಯಗಳು ಮತ್ತು ಕ್ವಿಬೆಕ್‍ನ ಗಾಸ್ಪೆ ತೀರ ಉತ್ಪಾದನೆಯ ಪ್ರಮುಖ ಪ್ರದೇಶಗಳು. ಒಟ್ಟು ಮೌಲ್ಯದ ಸೇ. 60ರಷ್ಟು ಮೀನನ್ನು ಈ ಪ್ರದೇಶಗಳು ಉತ್ಪಾದಿಸುತ್ತವೆ. ಅರಣ್ಯೋದ್ಯಮ ಮತ್ತು ಗಣಿ ಉದ್ಯಮಗಳಷ್ಟು ಪ್ರಾಮುಖ್ಯ ಮತ್ಸ್ಯೋದ್ಯಮಕ್ಕಿಲ್ಲವಾದರೂ ಇದೂ ವೈಶಿಷ್ಟ್ಯಪೂರ್ಣವಾದ್ದು.

 	5 ಜಲಶಕ್ತಿ: ಕೆನಡದ ಭೌಗೋಳಿಕ ಸ್ಥಿತಿ, ಅತ್ಯಂತ ಅನುಕೂಲಕರವಾದ ಸರೋವರಗಳು ಮತ್ತು ನದಿಗಳು ಜಲವಿದ್ಯುತ್‍ನ ಅಪಾರ ಉತ್ಪಾದನೆಗೆ ಸಾಧನಗಳಾಗಿವೆ. ಕೃಷಿ, ಕೈಗಾರಿಕೆ, ಅರಣ್ಯ ಸಂಪತ್ತಿನ ಉಪಯೋಗ, ಗಣಿ ಉತ್ಪಾದನೆ ಮತ್ತು ಪ್ರಗತಿಗೆ ಇದು ಮೂಲಕಾರಣ. 1900ರಲ್ಲಿ ಕೆನಡದ ವಿದ್ಯುತ್ ಉತ್ಪಾದನ ಶಕ್ತಿ 1,33,000 ಕಿವಾ.ಗಳಿದ್ದುದು 1968ರಲ್ಲಿ ಅದು 3,60,00,000 ಕಿವಾ.ಗಳನ್ನು ಮುಟ್ಟಿತು. 1960ರ ಡಿಸೆಂಬರ್ ಕೊನೆಯ ವೇಳೆಗೆ ಕೆನಡದಲ್ಲಿದ್ದ ವಿದ್ಯುತ್ ಉತ್ಪಾದನ ಕೇಂದ್ರಗಳ ವಿವರಗಳನ್ನು ಮುಂದೆ ಕೊಟ್ಟಿದೆ:
ಪ್ರಾಂತ್ಯ ಅಥವಾ ಪ್ರದೇಶ
(000 ಕಿ.ವಾ.ಗಳಲ್ಲಿ)

ಜಲವಿದ್ಯುತ್
ಉಷ್ಣಜನ್ಯ ವಿದ್ಯುತ್
ಒಟ್ಟು

ನ್ಯೂ ಫೌಂಡ್‍ಲೆಂಡ್
819
112
931

ಪ್ರಿನ್ಸ್ ಎಸ್‍ವರ್ಡ್ ದ್ವೀಪ
-
77
77

ನೋವ ಸ್ಕೋಷ
163
543
706

ನ್ಯೂ ಬ್ರನ್‍ಸ್‍ವಿಕ್
562
551
1,113

ಕ್ವಿಬೆಕ್
11,935
762
11,797

ಆಂಟೇರಿಯೋ
6,413
4,876
11,289

ಮ್ಯಾನಿಟೋಬ
1,184
369
1,553

ಸ್ಯಾಸ್ಕ್ಯಾಚೆವನ್
586
691
1,277

ಆಲ್ಬರ್ಟ
616
1,435
2,051

ಬ್ರಿಟಿಷ್ ಕೊಲಂಬಿಯ
3,531
1,515
5,046

ಯೂಕಾನ್ ಪ್ರದೇಶ
18
15
33

ವಾಯುವ್ಯ ಪ್ರದೇಶಗಳು
35
26
61

ಒಟ್ಟು
24,962
10,972
35,934

6 ಕೈಗಾರಿಕೆ: ಕೆನಡ ಕೈಗಾರಿಕಾಪ್ರಧಾನ ರಷ್ಟ್ರವಾದ್ದು 20ನೆಯ ಶತಮಾನದಲ್ಲಿ. ಒಂದನೆಯ ಮಹಾಯುದ್ಧ ವಾಸ್ತವವಾಗಿ ಕೆನಡದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿತು. 1930ರ ಆರ್ಥಿಕ ಕುಸಿತದ ಸಮಯವನ್ನು ಬಿಟ್ಟು ಉಳಿದ ಕಾಲದಲ್ಲಿ ಕೆನಡದ ಕೈಗಾರಿಕೆಗಳು ಅವ್ಯಾಹತ ಪ್ರಗತಿ ಸಾಧಿಸಿದುವು. ಎರಡನೆಯ ಮಹಾಯುದ್ಧ ಕೆನಡದ ಕೈಗಾರಿಕೆಗಳ ಪ್ರಗತಿಗೆ ಅನುಕೂಲವಾಯಿತು. ಎರಡನೆಯ ಮಹಾಯುದ್ಧದ ಅನಂತರ ಕೈಗಾರಿಕೋತ್ಪನ್ನದ ಮೌಲ್ಯ ಕೃಷಿ, ಅರಣ್ಯ, ಮೀನುಗಾರಿಕೆ, ಇವೆಲ್ಲವುಗಳ ಒಟ್ಟು ಉತ್ಪಾದನೆಯ ಮೌಲ್ಯವನ್ನೂ ಮೀರಿಸಿತು. ಕೈಗಾರಿಕೋತ್ಪನ್ನದ ಸೂಚ್ಯಂಕ (1935-39=100) 1946ರಲ್ಲಿ 189.9ಕ್ಕೂ 1952ರಲ್ಲಿ 246.3ಕ್ಕೂ ಏರಿತ್ತು. 1960ರ ವೇಳೆಗೆ ಕೈಗಾರಿಕಾ ಉತ್ಪನ್ನಗಳ ಮೌಲ್ಯ ಇತರೆಲ್ಲ ಉತ್ಪನ್ನ ಮೌಲ್ಯಗಳಿಗಿಂತ ಶೇಕಡಾ 30ರಷ್ಟು ಹೆಚ್ಚಾಗಿತ್ತು.

ದಕ್ಷಿಣ ಆಂಟೇರಿಯೋ ಮತ್ತು ಕ್ವಿಬೆಕ್ ಪ್ರದೇಶಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಕೇಂದ್ರೀಕರಿಸಿವೆ. ಇದಕ್ಕೆ ಚಾರಿತ್ರಿಕವಾಗಿ ಈ ಪ್ರದೇಶಗಳಿಗೆ ಕೈಗಾರಿಕೆಗಳ ಹಿನ್ನೆಲೆ ಇದ್ದುದು ಮುಖ್ಯ ಕಾರಣ. ಹೆಚ್ಚಿನ ಪ್ರಜಾಸಂಖ್ಯೆಯಿಂದ ಕೂಡಿದ ಈ ಪ್ರದೇಶಗಳಲ್ಲಿ ವಸ್ತುಗಳಿಗೆ ಸತತ ಬೇಡಿಕೆ ಇದ್ದುದು ಮತ್ತೊಂದು ಕಾರಣ. ಆಂಟೇರಿಯೋ ಕೆನಡದ ಕೈಗಾರಿಕೋತ್ಪನ್ನದ ಶೇಕಡಾ 50ರಷ್ಟು, ಕ್ವಿಬೆಕ್ ಶೇಕಡಾ 30ರಷ್ಟು, ಬ್ರಿಟಿಷ್ ಕೊಲಂಬಿಯ ಶೇಕಡಾ 9ರಷ್ಟು ಉತ್ಪಾದಿಸುತ್ತದೆ. ಹುಲ್ಲುಗಾವಲು ಪ್ರದೇಶಗಳ ಪಾಲು 9. ಮಾಂಟ್ರಿಯಾಲ್ ಕೆನಡದ ಮುಖ್ಯ ಕೈಗಾರಿಕಾಕೇಂದ್ರ. ಟಾರಂಟೊ ಸಹ ಇತ್ತೀಚೆಗೆ ಮಾಂಟ್ರಿಯಾಲ್ ಒಡನೆ ಸ್ಪರ್ಧಿಸುತ್ತಿದೆ. ಇತರ ಕೈಗಾರಿಕಾ ನಗರಗಳೆಂದರೆ ಹ್ಯಾಮಿಲ್ಟನ್, ವಿಂಡ್ಸರ್, ವ್ಯಾಂಕೂವರ್.

ರಫ್ತು ದೃಷ್ಟಿಯಿಂದ ಪೇಪರ್ ಮತ್ತು ಮರದ ತಿರುಳು ಕೈಗಾರಿಕೆ ಅತ್ಯಂತ ಮುಖ್ಯ. ಇದರ ಉತ್ಪನ್ನದ ಸೇ.80ರಷ್ಟು ರಫ್ತಾಗುತ್ತದೆ. ಇದನ್ನು ರಫ್ತು ಮಾಡುವ ದೇಶಗಳಲ್ಲಿ ಕೆನಡಕ್ಕೆ ಪ್ರಥಮಸ್ಥಾನ. ವಿಶ್ವದ ಪತ್ರಿಕಾ ಮುದ್ರಣ ಕಾಗದದಲ್ಲಿ ಶೇಕಡಾ 50ನ್ನು ಕೆನಡ ರಫ್ತು ಮಾಡುತ್ತದೆ. ಉತ್ಪಾದನ ಕೈಗಾರಿಕೆಗಳಲ್ಲಿ ಗಣಿ ಉತ್ಪನ್ನದ ಮುಂದಿನ ಕಾರ್ಯಗಳನ್ನು ನಡೆಸುವ ಕೈಗಾರಿಕೆಗಳ ಸ್ಥಾನ ಸಹ ಹಿರಿದು. ಕಬ್ಬಿಣದ ಅದುರು ಉತ್ಪಾದನೆಯಲ್ಲಿ ಕೆನಡಕ್ಕೆ ವಿಶ್ವದಲ್ಲಿ 4ನೆಯ ಸ್ಥಾನ. 1960ರ ಕೊನೆಯ ವೇಳೆಗೆ ಕೆನಡ 40 ಲಕ್ಷ ಟನ್‍ಗಳಷ್ಟು ಮೆತು ಕಬ್ಬಿಣವನ್ನೂ 50 ಲಕ್ಷ ಟನ್‍ಗಳಷ್ಟು ಉಕ್ಕನ್ನೂ ಉತ್ಪಾದಿಸುವ ಸಾಮಥ್ರ್ಯ ಪಡೆದುಕೊಂಡಿತ್ತು. ಜಲವಿದ್ಯುತ್ ಮತ್ತು ಬಾಕ್ಸೈಟ್ ಆಮದನ್ನು ಅವಲಂಬಿಸಿದ ಅಲ್ಯೂಮಿನಿಯಂ ಕೈಗಾರಿಕೆಯಲ್ಲಿ ಪ್ರಾಮುಖ್ಯದ ದೃಷ್ಟಿಯಿಂದ ಅಮೆರಿಕವನ್ನು ಬಿಟ್ಟರೆ ಕೆನಡಕ್ಕೆ ಪ್ರಥಮಸ್ಥಾನ. ಕೆನಡದ ಇತರ ಪ್ರಮುಖ ಕೈಗಾರಿಕೆಗಳೆಂದರೆ ಪೆಟ್ರೋಲಿಯಂ, ಆಹಾರವಸ್ತುಗಳ ಶುದ್ಧೀಕರಣ ಮತ್ತು ಅವನ್ನು ರಫ್ತಿಗಾಗಿ ಸಿದ್ಧತೆ ಮಾಡುವ ಕೈಗಾರಿಕೆಗಳು ಮತ್ತು ವಾಹನ ಕೈಗಾರಿಕೆಗಳು. ತುಪ್ಪುಳು ಚರ್ಮ ಕೈಗಾರಿಕೆಗೆ ಕೆನಡದಲ್ಲಿ ವಿಶಿಷ್ಟ ಸ್ಥಾನವಿದೆ. 

ಕೆನಡದ 100 ಅತ್ಯಂತ ದೊಡ್ಡ ಕೈಗಾರಿಕೆಗಳಲ್ಲಿ ಅರ್ಧಸಂಖ್ಯೆಯ ಮೇಲೆ ವಿದೇಶೀ ಕಾರ್ಪೊರೇಷನ್‍ಗಳ ಮಾಲೀಕತ್ವ ಅಥವಾ ನಿಯಂತ್ರಣ ಇದೆ.

 	7 ವಿದೇಶೀ ವ್ಯಾಪಾರ: ವಿದೇಶೀ ವ್ಯಾಪಾರದ ದೃಷ್ಟಿಯಿಂದ ಕೆನಡ 20ನೆಯ ಶತಮಾನದ ಪ್ರಾರಂಭದಲ್ಲಿ ಹೆಚ್ಚು ಮುಖ್ಯಸ್ಥಾನ ಪಡೆಯಲಾರಂಭಿಸಿತು. ಎರಡನೆಯ ಮಹಾಯುದ್ಧದ ಅನಂತರ ಇದರದು ಇಡೀ ವಿಶ್ವದಲ್ಲೇ 3ನೆಯ ಸ್ಥಾನ. 1954ರ ಅನಂತರ ಪಶ್ಚಿಮ ಜರ್ಮನಿಯ ಪ್ರಗತಿಯಿಂದಾಗಿ ಕೆನಡದ ಸ್ಥಾನ ನಾಲ್ಕಕ್ಕೆ ಸರಿಯಿತು. 1968ರಲ್ಲಿ ಕೆನಡದ ಒಟ್ಟು ರಾಷ್ಟ್ರೀಯ ವರಮಾನದಲ್ಲಿ ವಿದೇಶೀ ವ್ಯಾಪಾರದ ಭಾಗ ಶೇಕಡಾ37 ಆಗಿತ್ತು. 1962-68ರಲ್ಲಿ ಕೆನಡದ ರಫ್ತು ಮತ್ತು ಆಮದು ಅಂಕಿಗಳನ್ನು ಮುಂದೆ ಕೊಟ್ಟಿದೆ :

(ಹತ್ತು ಲಕ್ಷ ಡಾಲರ್‍ಗಳಲ್ಲಿ)
ವರ್ಷ
ರಫ್ತು
ಆಮದು
ಒಟ್ಟು ವ್ಯಾಪಾರ
ವ್ಯಾಪಾರ ಶಿಲ್ಕು

1
2
3
4
5

1962
6,347.7
 6,257.8
12,605.5
+89.9

1963
6,980.1
6,558.2
13,538.4
+421.9

1964
8,303.4
7,487.7
15,791.1
+815.3

1965
8,766.7
8,633.1
17,399.8
+133.5

1966
10,325.3
10,071.9
20,397.2
+253.4

1967
11,410.9
10,871.9
22,282.8
+539.0

1968
13,574.3
12,358.0
25,932.3
+1,216.3

ಕಳೆದ ಕೆಲವು ವರ್ಷಗಳಿಂದ ಕೆನಡದ ರಫ್ತಿನ ಸ್ವರೂಪ ಬದಲಾಗುತ್ತ ನಡೆದಿದೆ. ಪತ್ರಿಕಾ ಮುದ್ರಣಕಾಗದ ಮತ್ತು ವಾಹನಗಳು ಮತ್ತು ವಾಹನ ಭಾಗಗಳ ರಫ್ತು ಉಳಿದವಕ್ಕಿಂತ ಹೆಚ್ಚು. ಇವುಗಳ ಅನಂತರ ಗೋಧಿ, ತಿರುಳು, ಮರದ ದಿಮ್ಮಿ, ಪೆಟ್ರೋಲಿಯಂ, ಅಲ್ಯೂಮಿನಿಯಂ, ಕಬ್ಬಿಣದ ಅದುರು, ನಿಕ್ಕಲ್, ಆಸ್‍ಬೆಸ್ಟಸ್, ರಾಸಾಯನಿಕ ಗೊಬ್ಬರ, ನೈಸರ್ಗಿಕ ಅನಿಲ, ಇವು ಮುಖ್ಯ.

ಕೆನಡದ ವಿದೇಶೀ ವ್ಯಾಪಾರ ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದೊಡನೆ ನಡೆಯುತ್ತದೆ. ಇದು ಒಟ್ಟು ವ್ಯಾಪಾರದ ⅔ರಷ್ಟಿದೆ. 1968ರಲ್ಲಿ ತನ್ನ ನೆರೆ ರಾಷ್ಟ್ರಗಳಿಗೆ ಅದು ಮಾಡಿದ ರಫ್ತು ಒಟ್ಟು ರಫ್ತಿನ ಶೇಕಡಾ 67. ಇಷ್ಟೇ ಅಲ್ಲದೆ ಕೇವಲ ಅಮೆರಿಕ ಸಂಯುಕ್ತಸಂಸ್ಥಾನದಿಂದ ಮಾಡಿಕೊಂಡ ಆಮದಿನ ಪ್ರಮಾಣ ಒಟ್ಟು ಆಮದಿನಲ್ಲಿ ಸೇ.73. ಕೆನಡದ ವ್ಯಾಪಾರದಲ್ಲಿ ಎರಡನೆಯ ಸ್ಥಾನ ಬ್ರಿಟನ್ನಿನದು. ಅದು ತನ್ನ ರಫ್ತಿನ ಶೇಕರ್ಡಾರಷ್ಟನ್ನು ಆ ರಾಷ್ಟ್ರಕ್ಕೆ ಕಳುಹಿಸಿ, ಒಟ್ಟು ಆಮದಿನಲ್ಲಿ ಶೇಕಡಾ 6ರಷ್ಟನ್ನು ಆ ರಾಷ್ಟ್ರದಿಂದ ಪಡೆದುಕೊಳ್ಳುತ್ತದೆ. ಜಪಾನ್, ಪಶ್ಚಿಮ ಜರ್ಮನಿಗಳು ಕ್ರಮವಾಗಿ 3 ಮತ್ತು 4ನೆಯ ಸ್ಥಾನ ಪಡೆಯುತ್ತವೆ. ಈ ರಾಷ್ಟ್ರದೊಂದಿಗೆ ವ್ಯಾಪಾರ ನಡೆಸುವ ಉಳಿದ ರಾಷ್ಟ್ರಗಳು ನೆದರ್‍ಲೆಂಡ್ಸ್, ಬೆಲ್ಜಿಯಂ, ಲುಕ್ಸೆಂಬರ್ಗ್, ಇಟಲಿ, ರಷ್ಯ, ನಾರ್ವೇ, ಭಾರತ ಮತ್ತು ವೆನಿಜ್ವೀóಲ. ಕೆನಡದ ವಿದೇಶೀ ವ್ಯಾಪಾರದಲ್ಲಿ ಕೇವಲ ಶೇಕಡಾ 5ರಷ್ಟು ಮಾತ್ರ ಇತರ ಕಾಮನ್‍ವೆಲ್ತ್ ರಾಷ್ಟ್ರಗಳೊಡನೆ ನಡೆಯುತ್ತಿದೆ.

 	8 ಬ್ಯಾಂಕಿಂಗ್: ಕೆನಡದ ಕೇಂದ್ರೀಯ ಬ್ಯಾಂಕು ಬ್ಯಾಂಕ್ ಆಫ್ ಕೆನಡ. ಇದು 1934ರಲ್ಲಿ ಅಸ್ತಿತ್ವಕ್ಕೆ ಬಂತು. ಕೆನಡದ ವಾಣಿಜ್ಯ ಬ್ಯಾಂಕುಗಳನ್ನು ಇದು ಸಮರ್ಥವಾಗಿ ನಿಯಂತ್ರಿಸುತ್ತಿದೆ. 1944ರ ವರೆಗೆ ನೋಟುಗಳನ್ನು ನೀಡುವ ಅಧಿಕಾರ ಇತರ ಬ್ಯಾಂಕುಗಳಿಗೂ ಇತ್ತು. ಆದರೆ 1944ರ ಅನಂತರ ಈ ಹಕ್ಕನ್ನು ಸಂಪೂರ್ಣವಾಗಿ ಬ್ಯಾಂಕ್ ಆಫ್ ಕೆನಡಕ್ಕೆ ನೀಡಲಾಯಿತು. ಚಾರ್ಟರ್ಡ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಲ್ಲಿ ಸಂಚಿತಿ ಇಡುವುದು ಅಗತ್ಯ. 1967ರ ಬ್ಯಾಂಕಿಂಗ್ ಕಾಯಿದೆಯ ಪ್ರಕಾರ ಬ್ಯಾಂಕುಗಳು ತಮ್ಮ ಬೇಡಿಕೆ ಠೇವಣಿಗಳ ಶೇಕಡಾ 12ರಷ್ಟು ಮತ್ತು ತಿಳಿವಳಿಕೆ ಠೇವಣಿಗಳ ಶೇಕಡಾ 4ರಷ್ಟನ್ನು ಕೇಂದ್ರೀಯ ಬ್ಯಾಂಕಿನಲ್ಲಿ ಸಂಚಿತಿ ಇಡುವುದು ಅಗತ್ಯವಾಗಿದೆ. ಕೇಂದ್ರೀಯ ಬ್ಯಾಂಕಿನ ಒಡೆತನ ಸರ್ಕಾರದ್ದು.
 
	9 ಕಾರ್ಮಿಕ ಸಂಘಗಳು ಮತ್ತು ಸಾಮಾಜಿಕ ಭದ್ರತೆ: 1968ರಲ್ಲಿ ಕೆನಡದಲ್ಲಿ 79,19,000 ಕಾರ್ಮಿಕರಿದ್ದರು. ಇವರಲ್ಲಿ ಕಾರ್ಮಿಕ ಸಂಘಗಳ ಸದಸ್ಯರಾಗಿದ್ದವರು ಸುಮಾರು 20,10,000. ಒಟ್ಟು ಸದಸ್ಯರಲ್ಲಿ ಶೇಕಡಾ 78 ಮಂದಿ ಕೆನಡಿಯನ್ ಲೇಬರ್ ಕಾಂಗ್ರೆಸ್‍ನ ಸದಸ್ಯರು. ಶೇಕಡಾ 10ಕ್ಕಿಂತಲೂ ಸ್ವಲ್ಪ ಹೆಚ್ಚು ಮಂದಿ ಕಾನ್‍ಫೆಡರೇಷನ್ ಆಫ್ ನ್ಯಾಷನಲ್ ಟ್ರೇಡ್ ಯೂನಿಯನ್ಸ್‍ನ ಸದಸ್ಯರು. ಕೆನಡದ ಕಾರ್ಮಿಕ ಸಂಘಗಳ ಸದಸ್ಯರ ವೈಶಿಷ್ಟ್ಯವೆಂದರೆ ⅔ಕ್ಕಿಂತಲೂ ಹೆಚ್ಚು ಸದಸ್ಯರು ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಗಳ ಸದಸ್ಯರು. ಕೇವಲ ¼ ಭಾಗದಷ್ಟು ಮಾತ್ರ ಕೆನಡದೊಳಗಣ ಕಾರ್ಮಿಕ ಸಂಘಗಳ ಸದಸ್ಯರು.

ಸಾಮಾಜಿಕ ಭದ್ರತಾಕ್ರಮಗಳಲ್ಲಿ ಕೆನಡ ತುಂಬ ಮುಂದುವರಿದಿದೆ. ಕೆನಡದ ಕಾರ್ಮಿಕ ಜೀವನಮಟ್ಟ ಅತ್ಯಂತ ಹೆಚ್ಚಿನದು. ಇದು ವಿಶ್ವದಲ್ಲಿಯೇ ಎರಡನೆಯ ಸ್ಥಾನ ಪಡೆದಿದೆ. ಸಾಮಾಜಿಕ ಭದ್ರತಾರಂಗದಲ್ಲಿ ಸಂಯುಕ್ತ ಸರ್ಕಾರ ಕುಟುಂಬ ಭತ್ಯ, ನಿರುದ್ಯೋಗ ವಿಮೆ, ವೃದ್ಧಾಪ್ಯ ವೇತನ, ಯುದ್ಧ ಸಂತ್ರಸ್ತನಿಧಿ ಇವುಗಳನ್ನು ನೋಡಿಕೊಳ್ಳುತ್ತದೆ. ಇತರ ಸೇವೆಗಳು ಪ್ರಾಂತ್ಯ ಸರ್ಕಾರಗಳಿಗೆ ಸಂಬಂಧಪಟ್ಟ ವಿಷಯ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭದ್ರತಾಕ್ರಮಗಳು ಭಿನ್ನವಾಗಿವೆ. ಸಂಯುಕ್ತ ಸರ್ಕಾರ ಬಜೆಟ್‍ನಲ್ಲಿ ಶೇಕಡಾ 27ರಷ್ಟನ್ನು ಆರೋಗ್ಯ ಮತ್ತು ಸಮಾಜಕಲ್ಯಾಣ ಕಾರ್ಯಗಳಿಗಾಗಿ ವೆಚ್ಚ ಮಾಡುತ್ತಿದೆ. 1966ರಲ್ಲಿ ಆರಂಭವಾದ ಕೆನಡ ವಿರಾಮ ವೇತನ ಯೋಜನೆಯಿಂದ ಬಹುತೇಕ ನೌಕರರಿಗೆ ವೃದ್ಧಾಪ್ಯ, ಅಂಗವಿಕಲತೆ ಮತ್ತು ಅವಲಂಬಿತರ ಧನಸಹಾಯ ರಕ್ಷೆ ಲಭಿಸಿದೆ. ಫೆಡರಲ್ ಆರೋಗ್ಯವಿಮಾ ಯೋಜನೆ 1968ರ ಜುಲೈ 1 ರಂದು ಜಾರಿಗೆ ಬಂತು. 7 ಪ್ರಾಂತ್ಯಗಳು ಇದರಲ್ಲಿ ಭಾಗವಹಿಸುತ್ತಿವೆ. ಇದು ಕಾರ್ಮಿಕ ಆರೋಗ್ಯ ರಕ್ಷಣೆಗಾಗಿ ರೂಪುಗೊಂಡಿರುವ ಒಂದು ಯೋಜನೆ. ಕೆನಡದ ವಿಮಾಯೋಗ್ಯ ಜನರಲ್ಲಿ ಶೇಕಡಾ 99ಕ್ಕೆ ಫೆಡರಲ್ ಪ್ರಾಂತ್ಯ ಆಸ್ಪತ್ರೆ ವಿಮಾ ಸೌಲಭ್ಯ ಲಭ್ಯವಾಗಿದೆ.

ಕೆನಡದ ಸಂಪನ್ಮೂಲಗಳನ್ನು ಇನ್ನೂ ಹೆಚ್ಚಾಗಿ ಬಳಸಿಕೊಂಡು, ಇನ್ನೂ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಸಾಧಿಸಲು ಉದ್ದೇಶದಿಂದ 1963ರಲ್ಲಿ ಎಕನಾಮಿಕ್ ಕೌನ್ಸಿಲ್ ಆಫ್ ಕೆನಡ ಎಂಬ ಒಂದು ಸ್ವತಂತ್ರ ಸಲಹಾ ಸಮಿತಿಯ ರಚನೆಯಾಯಿತು. ಆರ್ಥಿಕ ಬೆಳೆವಣಿಗೆಯನ್ನು ಸಾಧಿಸಲು, ಪೂರ್ಣೋದ್ಯೋಗವನ್ನು ಮುಟ್ಟಲು ಮತ್ತು ವ್ಯಾಪಾರ ಹೆಚ್ಚಿಸಲು ಅಗತ್ಯವಾದ ಸಲಹೆಗಳನ್ನು ಇದು ಸರ್ಕಾರಕ್ಕೆ ನೀಡುತ್ತದೆ. ವರ್ಷಕ್ಕೆ ಶೇಕಡಾ5.5ರ ಆರ್ಥಿಕ ಬೆಳೆವಣಿಗೆಯನ್ನು ಸಾಧಿಸಿ ಕೆನಡದ ಒಟ್ಟು ಉತ್ಪನ್ನವನ್ನು 1975ರ ವೇಳೆಗೆ 10,000 ಕೋಟಿ ಡಾಲರ್‍ಗಳಿಗೇರಿಸುವ ಯೋಜನೆ ರಚಿಸಲಾಗಿದೆ.  			
	(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ